St. Thomas School, Alangar
ದೇಶದ ಅಭಿವೃಧ್ದಿಯಲ್ಲಿ ಶಿಕ್ಷಣದ ಪಾತ್ರ ಹಿರಿದು. ಎಳೆಯ ಮುಗ್ದ ಮನಸ್ಸನ್ನು ಹದಗೊಳಿಸಿ ತಿದ್ದಿತೀಡಿ ವ್ಯಕ್ತಿಗಳನ್ನು ಶಕ್ತಿಗಳನ್ನಾಗಿ ಮಾರ್ಪಡಿಸಿ ರಾಷ್ಟ್ರದ ಅಭಿವೃದ್ದಿಗೆ ಪೂರಕವಾದ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ವ್ಯಕ್ತಿತ್ವ ವಿಕಸನದೊಳಗೆ ಉಜ್ವಲ ಭವಿಷ್ಯದ ದಿಶೆ ತೋರಿಸುತ್ತದೆ.
ಜ್ಯೆನಕಾಶಿ ಎಂದೇ ಪ್ರಖ್ಯಾತವಾದ ಮೂದಬಿದರೆಯ ಉತ್ತರ ದಿಕ್ಕಿನಲ್ಲಿ ಹಚ್ಚಹಸುರಿನ ಪ್ರಕ್ರತಿಯ ನಡುವೆ ಪ್ರಶಾಂತವಾದ ವಾತಾವರಣದಲ್ಲಿಕಂಗೊಳಿಸುತ್ತಿರುವ ಸುಂದರತಾಣವೇ ‘ಅಲಂಗಾರು’. ಅಲಂಗಾರಿನಲ್ಲಿ ಕೇಂದ್ರದ ನೆಲೆಯಲ್ಲಿ ಶೋಭಿಸುತ್ತಿರುವ , ಹೋಲಿ ರೋಜರಿ ಕ್ಯೆಸ್ತದೇವಾಲಯದ ಆವರಣದಲ್ಲಿ ಹೆಮ್ಮೆಯಿಂದ ತಲೆಎತ್ತಿ ನಿಂತಿದೆ ಸಂತಥೋಮಸ್ ವಿದ್ಯಾದೇಗುಲ. ಇದರ ಆಡಳಿತೆಯನ್ನು ಕಥೋಲಿಕ್ ವಿದ್ಯಾ ಮಂಡಳಿ (ರಿ) ಮಂಗಳೂರು ನೋಡಿಕೊಳ್ಳುತ್ತಿದೆ.
ನೂರು ವರ್ಷಗಳ ಹಿಂದೆ ಅಲಂಗಾರು ಹೀಗಿರಲಿಲ್ಲ. ಕೆಲವೇ ಬಡ ಕುಟುಂಬಗಳನ್ನೊಳಗೊಂಡ ಒಂದುಚಿಕ್ಕ ಹಳ್ಳಿಯಾಗಿತ್ತು. ಈ ಹಳ್ಳಿಯಲ್ಲಿ ವಿದ್ಯೆ ಪ್ರವೇಶಿಸುವ ತನಕ ಸರ್ವೋದಯವಾಗಲಿ , ಸಮಷ್ಟಿ ವಿಕಾಸವಾಗಲಿ ಸಾಧ್ಯವಿಲ್ಲ. ಈ ಸತ್ಯವನ್ನುಅರಿತು "ಯೇಸು ಸಭೆ"ಯ ಪೂಜ್ಯಗುರು ವಂ. ಫಾವುಸ್ತಿನ್ ಕೋರ್ಟಿಯವರು ಮಂಗಳೂರಿನ ಪ್ರಖ್ಯಾತ ಸಂತ ಎಲೋಶಿಯಸ್ ಕಾಲೇಜಿನ ಪ್ರೊಫೆಸರ್ ಹಾಗೂ ಸಹ ಪ್ರಾಂಶುಪಾಲರ ಘನ ಹುದ್ದೆಗಳನ್ನು ತೊರೆದು, ಗ್ರಾಮೀಣ ಮಕ್ಕಳನ್ನು ಸನ್ಮಾರ್ಗದಲ್ಲಿನಡೆಯಿಸಿ ವಿದ್ಯಾವಂತರನ್ನಾಗಿಯೂ, ಗುಣವಂತನ್ನಾಗಿಯೂ ಮಾಡುವ ಕೆಲಸದಲ್ಲಿ ಯಶಸ್ವಿ ಪಡೆದರು. ಇಂತಹ ಮಹಾನ್ ದೈವಪುರುಷರ ಆಗಮನದಿಂದ ಅಲಂಗಾರು ಪ್ರದೇಶವು ಧನ್ಯವಾಯಿತು. ಈ ಮಹಾನ್‍ಚೇತನ ಪ್ರಾರಂಭಿಸಿದ ಶಾಲೆಗೆ ಈಗ ಶತಮಾನೋತ್ಸವ ಸಂಭ್ರಮ.
Fr. Faustine Corti Memorial at Alangar Church
1921ರಲ್ಲಿ ವಂ. ಗುರು ಫಾವುಸ್ತಿನ್ ಕೋರ್ಟಿಯವರ ಸತತ ಪರಿಶ್ರಮದಿಂದ ಸಂತ ಥೋಮಸ್ ಶಾಲೆಯು ಸ್ಥಾಪನೆಯಾಯಿತು. ಅವರ ನಂತರ ಅದೇ ಯೇಸು ಸಭೆಯ ಗುರು ಪೂಜ್ಯ ಎ. ಜಿಯಾರೋರವರು ಶಾಲೆಯನ್ನು ಮುನ್ನಡೆಸುತ್ತಾ ಮುಂದುವರಿದರು. ಪ್ರಾರಂಭದಲ್ಲಿ1ರಿಂದ 5 ನೇ ತರಗತಿಗಳ ವರೆಗೆ ಮಾತ್ರ ಮಾನ್ಯತೆ ಪಡೆದಿತ್ತು. 1929ರಲ್ಲಿ ಪೂಜ್ಯಗುರು ಎಫ್. ಎಲಿಯಾಸ್ ಡಿ ಸೊಜರವರು ಶಾಲಾ ಸಂಚಾಲಕರಾಗಿ ಬಂದರು. ಇವರ ನೇತೃತ್ವದಲ್ಲಿ ಶಾಲೆಯು ಅತೀ ಹೆಚ್ಚಿನ ಪ್ರಗತಿಯನ್ನು ಸಾಧಿಸಿತು. ಇವರ ಕಾಲದಲ್ಲಿಯೇ ಮೊತ್ತಮೊದಲ ಕಟ್ಟಡ ನಿರ್ಮಾಣಗೊಂಡಿತು. ಇವರು ಈ ಶಾಲೆಯ ‘ಶಿಲ್ಪಿ’ ಎಂಬ ಕೀರ್ತಿಗೆ ಪಾತ್ರರಾದರು. 1921 ರಿಂದ 1935 ರವರೆಗೆ ಶ್ರೀ ಮಾನ್ವೆಲ್ ಡಿ ಸೋಜರವರು ಮುಖೋಪಾದ್ಯಾಯರಾಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಹಾಗೂ ಶ್ರೀ ಗಾಸ್ಪರ್ ಪಿಂಟೋರವರು ಈ ಶಾಲೆಯಲ್ಲಿ ಸಲ್ಲಿಸಿದ ಸೇವೆ ಅಪಾರ. ಆರಂಭಿಕ ದಿನಗಳಲ್ಲಿ ಶಾಲೆಯನ್ನು ಮುನ್ನಡೆಸುವುದು ತುಂಬಾ ಕಷ್ಟದಾಯಕ ಕೆಲಸವಾಗಿತ್ತು. ವ್ಯವಸ್ಥಿತ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಗುಣ ಮಟ್ಟದ ಶಿಕ್ಷಣ ನೀಡುವುದರಲ್ಲಿ ಶಾಲೆಯ ಸಂಚಾಲಕರ ಜೊತೆಗೆ ಶಿಕ್ಷಕರು ಬಹಳ ಪರಿಶ್ರಮಪಟ್ಟಿದ್ದಾರೆ.
1935 ರಲ್ಲಿಶಾಲೆಯಲ್ಲಿ ಬೋಧಿಸಲು "ಸಿಸ್ಟರ್ಸ್ ಆಫ್‍ಚಾರಿಟ” ಸಂಸ್ಥೆಯ ಭಗಿನಿಯರನ್ನು ಮಂಗಳೂರಿನಿಂದ ಬರ ಮಾಡಿಕೊಳ್ಳಲಾಯಿತು. ಹಾಗೂ ಶಾಲೆಯ ನಿರ್ವಹಣೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿ ಕೊಡಲಾಯಿತು. ಧರ್ಮಭಗಿನಿಯರ ಆಗಮನದ ನಂತರ ಶೈಕ್ಷಣಿಕ ಪ್ರಗತಿ ವೇಗ ಕಂಡಿತು. ಮಕ್ಕಳಿಗೆ ಶಾಲೆಯು ಇನ್ನೊಂದು ಮನೆಯಿದ್ದಂತೆ ಎಂಬ ಭಾವನೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಮೂಡತೊಡಗಿತು. ಮಕ್ಕಳಿಗೆ ಅಕ್ಷರದ ಪರಿಚಯ ಮಾಡುವುದರ ಜೊತೆಗೆ ಅಕ್ಕರೆಯ, ಮಮತೆಯ , ಸಕಾರ ಮೂರ್ತಿಯಂತಾದರು. ಮಕ್ಕಳ ಬೇಕು ಬೇಡಗಳನ್ನು ಅರಿತು ಅವರ ವಿದ್ಯಾರ್ಜನೆಯ ಹಾದಿ ಸುಗಮಗೊಳಿಸುವಲ್ಲಿ ಈ ಧರ್ಮಭಗಿನಿಯರು ಸಮರ್ಪಣಾಭಾವದಿಂದ ಶ್ರಮಿಸಿದ್ದಾರೆ. ಸಿಸ್ಟರ್ ಜುಲಿಯಾನ ಡಿಸೋಜರವರು ಕೇವಲ 2 ವರ್ಷಗಳ ಕಾಲ ಮುಖ್ಯೊಪಾಧ್ಯಾಯಿನಿಯರಾಗಿ, 26 ವರ್ಷಗಳ ಕಾಲ ಸಹ-ಶಿಕ್ಷಕಿಯಾಗಿ ಈ ಶಾಲೆಯ ಪ್ರಗತಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಶಾಲೆಯ ಚರಿತ್ರೆಯಲ್ಲಿ 35 ವರ್ಷಗಳ ಕಾಲ 1937-1971ರವರೆಗೆ ಮಖ್ಯೋಪಾಧ್ಯಾಯಿನಿಯಾಗಿ ಸುಧೀರ್ಘ ಹಾಗೂ ಫಲಪ್ರದ ಸೇವೆ ಸಲ್ಲಿಸಿದ ಕೀರ್ತಿಯು ಸಿಸ್ಟರ್ ನತಾಲಿಯಾರವರಿಗೆ ಸಲ್ಲುತ್ತದೆ. ಇವರ ಹೆಸರು ಅಲಂಗಾರಿನಲ್ಲಿ ಹಾಗೂ ಇಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳ ಮನದಲ್ಲಿ ಚಿರಸ್ಮರಣೀಯವಾಗಿದೆ. ಕೇವಲ ಅಲಂಗಾರಿನ ಮಕ್ಕಳಲ್ಲದೆ ಪಾಲಡ್ಕ , ಮೂಡಬಿದ್ರೆ, ಬೆಳುವಾಯಿ, ಗಂಟಲ್ಕಟ್ಟೆ, ಮಾಸ್ತಿಕಟ್ಟೆಯ ಹಲವಾರು ವಿದ್ಯಾರ್ಥಿಗಳು ಈ ಕೇಂದ್ರದಿಂದ ವಿದ್ಯೆಯನ್ನು ಪಡೆದಿದ್ದಾರೆ. ಆದ್ದರಿಂದ ಈ ಶಾಲೆ ‘ಮಾದ್ರಿಗಳ ಶಾಲೆ’ ಎಂದು ಹೆಸರುವಾಸಿಯಾಗಿತ್ತು. ಹೀಗೆ ಮಾತೃಹೃದಯಿ ಸಿಸ್ಟರಗಳ ಸೇವೆ ಜನಾನುರಾಗಿಯಾಯಿತು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಬರಲು 1952ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯು ಸಂತ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತು. ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಪ್ರಗತಿಯನ್ನು ಗುರುತಿಸಿದ ಶಾಲೆಗೆ ಸರಕಾರದಿಂದ 'ಉತ್ತಮ ಶಾಲೆ' ಎಂಬ ಪ್ರಶಸ್ತಿ ಲಭಿಸಿದೆ. ವೈಯಕ್ತಿಕವಾಗಿ ಸಿಸ್ಟರ್ ನತಾಲಿಯಾರವರಿಗೆ ಸರಕಾರದಿಂದ 'ಶಿಫಾರಸ್' ಪತ್ರ ದೊರೆತಿದೆ. ಇದುವರೆಗೆ ಸುಮಾರು 13 ಮಂದಿ ಸಂಚಾಲಕರು ಅತ್ಯತ್ತಮ ಸೇವೆಯನ್ನು ನೀಡಿದ್ದಾರೆ.
ಪ್ರಸ್ತುತ 2018 ರಿಂದ ವಂ. ಗುರು ವಾಲ್ಟರ್ ಡಿ ಸೋಜರವರು ಶಾಲೆಯ ಅಭ್ಯುದಯಕ್ಕೆ ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಿದ್ದಾರೆ. ಈ ಶತಮಾನೊತ್ಸವವನ್ನುಆಚರಿಸುವ ಸೌಭಾಗ್ಯವನ್ನು ದೇವರು ಅವರಿಗೆ ದಯಪಾಲಿಸಿದ್ದಾರೆ. ದಕ್ಷ ಹಾಗೂ ಉತ್ಸಾಹಬರಿತ ಸಂಚಾಲಕರಾದ ಇವರು ಶಾಲೆಯ ಶ್ರೇಯೊಭಿವೃದ್ದಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಈ ಶತಮಾನೋತ್ಸವ ಆಚರಿಸುವ ಕನಸ್ಸು ಒಂದು ವರ್ಷದ ಹಿಂದೆ ಆರಂಭಗೊಂಡಿದೆ. ಶಾಲೆಯ ಶತಮಾನೋತ್ಸವದ ಸಮಯದಲ್ಲಿ ಹತ್ತು ಹಲವು ಕಾರ್ಯಗಳು ಯಶ ಕಂಡವು. ಶಾಲಾ ಕಟ್ಟಡಗಳ ದುರಸ್ತಿ, ಶಾಲೆಗೆ ನೀರಿನ ವ್ಯವಸ್ಥೆ, ಬಾಲಕಿಯರಿಗೆ ಮತ್ತು ಬಾಲಕರಿಗೆ ಹೊಸ ಶೌಚಾಲಯ, ವಿವಿದ ಕ್ರೀಡೆಗಳಿಗೆ ಪೂರಕವಾಗುವಂತಹ ಆಟದ ಮೈದಾನ, ಮಕ್ಕಳಿಗೆ ಬಿಸಿಯೂಟ ತಯಾರಿಕೆಗೆ ಸುಸಜ್ಜಿತವಾದ ಅನ್ನ-ದಾಸೋಹ ಕಟ್ಟಡ ನಿರ್ಮಾಣ - ಹೀಗೆ ಈ ಶಾಲೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ ಧರ್ಮಗುರುಗಳು ತಮ್ಮ ಸೇವಾವದಿಯಲ್ಲಿ ಶಾಲೆಯ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆಗೆ ಅದಕ್ಕೆ ಪೂರಕವಾದ ಅಂಶಗಳು ಈ ಶಾಲೆಯಲ್ಲಿ ಅಳವಡಿಸಲು ಸಾಧ್ಯವಾಗಿದೆ.
ಹಲವಾರು ಧರ್ಮಭಗಿನಿಯರು ಮುಖ್ಯೋಪಾದ್ಯಾನಿಯಾಗಿ ಹಾಗೂ ಶಿಕ್ಷಕರಾಗಿಯೂ ತಮ್ಮಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇವರಲ್ಲಿಅನೇಕರು ದೇವರ ಸಾನಿದ್ಯವನ್ನು ಸೇರಿದ್ದಾರೆ. ಅವರೆಲ್ಲರಿಗೆ ದೇವರು ಚಿರಶಾಂತಿ ನೀಡಲೆಂದು ಆಶಿಸುತ್ತೇವೆ. 1935ರಿಂದ ಇಂದಿನವರೆಗೆ 14 ಮಂದಿ ಧರ್ಮಭಗಿನಿಯರು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಾಗಿ ಶ್ರಮಿಸಿದ್ದಾರೆ. ಸಹ-ಶಿಕ್ಷಕರಾಗಿ ಅನೇಕ ಶಿಕ್ಷಕಿಯರು ಈ ಶಾಲೆಯಲ್ಲಿ ತಮ್ಮ ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಕಲಿಸಿದ ಹಾಗೂ ಕಲಿಸುವ ಶಿಕ್ಷಕಿಯರು ಶಿಸ್ತು ಬದ್ಧ ಹಾಗೂ ಸಕ್ರೀಯಾತ್ಮಕ ವ್ಯಾಸಂಗದತ್ತ ಮಕ್ಕಳನ್ನು ಮುನ್ನಡೆಸುವಲ್ಲಿ ಸಾಕಸ್ಟು ಪರಿಶ್ರಮಪಟ್ಟಿರುವರು.
ಪ್ರಸುತ್ತ ಶಾಲೆಯಲ್ಲಿ143 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಸರಕಾರದಿಂದ ಮಾನ್ಯತೆ ಪಡೆದ 3 ಶಿಕ್ಷಕರು, ಇತರ ಗೌರವ ಶಿಕ್ಷಕರು ಸೇರಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಸರಕಾರದಿಂದ ಬಿಸಿಯೂಟ ವ್ಯವಸ್ಥೆ ಹಾಗೂ ಪಠ್ಯ ಪುಸ್ತಕ ನೀಡಲಾಗಿದೆ. ಇಲಾಖಾ ವತಿಯಿಂದ ನಡೆಯುವ ಪ್ರತಿಭಾ ಕಾರಂಜಿ ಆಟೋಟ ಸ್ಪರ್ಧೆಗಳು, ಇತರ ಎಲ್ಲಾ ಚಟುವಟಿಕೆಗಳಲ್ಲಿ ಶಾಲೆಯ ಮಕ್ಕಳು ಭಾಗವಹಿಸಿ, ಬಹುಮಾನ ಪಡೆಯುತ್ತಾರೆ.
ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದ ವಿವಿದ ಸ್ಥರಗಳಲ್ಲಿ ಸೇವೆಗೈಯುತ್ತಾ ಜನಾನುರಾಗಿಯಾಗಿದ್ದಾರೆ. ಈ ವಿದ್ಯಾಸಂಸ್ಥೆಯಲ್ಲಿ ಕಲಿತವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ, ಸಾಮಾಜಿಕ, ಧಾರ್ಮಿಕ ಮುಖಂಡರಾಗಿ, ಧರ್ಮಾಧ್ಯಕ್ಷರಾಗಿ, ಗುರುಗಳಾಗಿ, ಧರ್ಮ ಭಗಿನಿಯರಾಗಿ , ಯಶಸ್ವಿ ಉದ್ಯಮಿಗಳಾಗಿ, ವಕೀಲರಾಗಿ, ವೈದ್ಯರಾಗಿ, ವ್ಯವಸ್ಥಾಪಕರಾಗಿ, ಶಿಕ್ಷಕರಾಗಿ, ಆದರ್ಶ ಕೃಷಿಕರಾಗಿ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ.
ಹೀಗೆ ಸಹೃದಯದಿಂದ ಮತ್ತು ಸದುದ್ದೇಶದಿಂದ ಸ್ಥಾಪಿಸಲ್ಪಟ್ಟ ಈ ಶಾಲೆಯು ಇವತ್ತು ಜ್ಞಾನದ ಹೆಮ್ಮರವಾಗಿ ಮೆರೆಯುತ್ತಿದೆ. ತನ್ನ ಶತಮಾನೋತ್ಸವವನ್ನು ಆಚರಿಸುವ ಈ ಶುಭಗಳಿಗೆಯಲ್ಲಿ ಇದಕ್ಕೆ ಕಾರಣರಾದ ಸರ್ವರನ್ನು ಶಾಲೆಯು ಸ್ಮರಿಸುತ್ತದೆ. ವಿಶೇಷವಾಗಿ 1921ರಿಂದ ಇಂದಿನವರೆಗೆ ಶಾಲಾ ಅಭ್ಯುದಯಕ್ಕಾಗಿ ಅಹರ್ನಿಷಿ ದುಡಿದ ಎಲ್ಲಾ ಸಂಚಾಲಕರನ್ನು, ಮುಖ್ಯ ಶಿಕ್ಷಕಿಯರನ್ನು, ಶಿಕ್ಷಕ ವೃಂದದವರನ್ನು, ಶಾಲಾ ಆಡಳಿತ ಹಾಗೂ ಶಾಲಾಭಿವೃದ್ದಿ ಸಮಿತಿಯ ಸದಸ್ಯರನ್ನು, ಮಕ್ಕಳ ಹೆತ್ತವರನ್ನು, ಪೋಷಕರನ್ನು, ಇಲಾಖಾಧಿಕಾರಿಗಳನ್ನು , ಶಾಲಾ ಹಳೆ ವಿದ್ಯಾರ್ಥಿ ವೃಂದದವರನ್ನು ಹಾಗೂ ದಾನಿಗಳನ್ನು ಶಾಲೆಯು ಪ್ರೀತಿಪೂರ್ವಕವಾಗಿ ಸ್ಮರಿಸುತ್ತದೆ.
Courtesy : Article released by Alangar Church during the Centenary celebration of St Thomas School in Feb 2022
Related Links :