Photo : infantjesusmangalore.net

ಸುಮಾರು ಅರವತ್ತು - ಎಪ್ಪತ್ತು ವರುಷಗಳ ಇತಿಹಾಸವಿದ್ದು ‘ಪವಾಡಗಳ ಗುಡ್ಡ’ ಎಂದೇ ಜನಜನಿತವಾಗಿರುವ ‘ಕಾರ್ಮೆಲ್ ಗುಡ್ಡ’ಕ್ಕೆ ನಡೆದು ಹೋದಂತೆ ಭಕ್ತರ ಹೃದಯದಲ್ಲಿ ನೆಮ್ಮದಿ ಹಾಗೂ ಆತ್ಮೋಲ್ಲಾಸ ತುಂಬಿ ಬರುತ್ತದೆ. ಅದಕ್ಕೆ ಕಾರಣ, ಆ ಪವಿತ್ರ ಗುಡ್ಡದ ಮೇಲೆ ನೆಲೆಗೊಂಡಿರುವ ಮುಗ್ದ ಸ್ವರೂಪದ ಬಾಲ ಯೇಸು. ‘ಬೇಡಿದ್ದೆಲ್ಲಾ ಕರುಣಿಸುವ ಬಾಲಯೇಸು’ ಎಂದೇ ಪ್ರಸಿದ್ಧಿಗೊಂಡಿರುವ ಈ ಪುಣ್ಯಕ್ಷೇತ್ರದ ಮಹಿಮೆ ಜನರ ಬಾಯಲ್ಲೇ ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ಈ ಪುಣ್ಯಕ್ಷೇತ್ರ ಜಾತಿ ಧರ್ಮವೆಂಬ ಭಾವ ಬದಿಗೊತ್ತಿ ಸರ್ವರನ್ನೂ ತನ್ನತ್ತ ಸೆಳೆಯುತ್ತಾ, ಪ್ರತಿಯೊಬ್ಬರಿಗೂ ಆಪ್ತಗೊಳ್ಳುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ!

ಮಂಗಳೂರಿನ ನಂತೂರು ವೃತ್ತ ಬಳಸಿ 200 ಮೀ. ದೂರದಲ್ಲಿ ಬಿಕರ್ನಕಟ್ಟೆ ಹಾದಿಯಲ್ಲಿ ಇರುವ ಈ ಪುಣ್ಯಕ್ಶೇತ್ರ ಪ್ರತಿ ಗುರುವಾರ ಸಾವಿರಗಟ್ಟಲೆ ಭಕ್ತಾದಿಗಳನ್ನು ದಿನವಿಡೀ ಬರಮಾಡಿಕೊಳ್ಳುತ್ತದೆ. ಕ್ರಿಸ್ಮಸ್ ಹಬ್ಬದ ಬೆನ್ನಲ್ಲೆ ಈ ಗುಡ್ಡದ ಮೇಲೆ ಬಾಲಯೇಸುವಿಗೆ ಗೌರವಾರ್ಥವಾಗಿ ಜನವರಿ 5ರಿಂದ 15ರ ತನಕ ನಡೆಯುವ ಮಹೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸಿ ಪುನೀತರಾಗುತ್ತಾರೆ. ಈ ಬಾಲಯೇಸುವಿನ ಭಕ್ತಿಯಾಚರಣೆ ಝೆಕ್ ದೇಶದ ಪ್ರಾಗಾ ನಗರದಲ್ಲಿ ಆರಂಭಗೊಂಡಿತ್ತು. ಇದು ಯೇಸುವಿನ ಬಾಲ್ಯವನ್ನು ಸಂಭ್ರಮದಿಂದ ಕೊಂಡಾಡುವ ಭಕ್ತಿಯಾಚರಣೆ. ಯೇಸು ಲೋಕೋದ್ಧಾರಕರಾಗಲು ಮನುಜ ಜನ್ಮ ತಾಳಿದ ರಹಸ್ಯವನ್ನು ಧ್ಯಾನಿಸಿ ಆಚರಿಸುವ ಭಕ್ತಿ ಇದಾಗಿದ್ದು, ಒಂದು ಕೈಯಲ್ಲಿ ಜಗವನ್ನೇ ಎತ್ತಿಕೊಂಡು ನಿಂತಿರುವ ಬಾಲ ಯೇಸುವಿನಲ್ಲಿ ಅಭಯ ಹಸ್ತವನ್ನು ಬಯಸಿ ಬಂದವರಾರು ಬರಿಗೈಯಲ್ಲಿ ಹಿಂದಿರುಗಲಾರರು ಎಂಬ ನಂಬಿಕೆ ದಟ್ಟವಾಗಿದೆ. ಬಾಲಯೇಸುವಿನ ಕೃಪಾಶೀರ್ವಾದಗಳನ್ನು, ಅದ್ಭುತ ಕಾರ್ಯಗಳನ್ನು ಅನುಭವಿಸಿದವರೆಲ್ಲರೂ ಈ ಮಾತನ್ನು ಹೇಳುತ್ತಾರೆ.

ಮುಗ್ದಸ್ವರೂಪಿ ಬಾಲಯೇಸುವಿನ ಪವಾಡಮೂರ್ತಿ

ಸ್ಪೈನ್ ದೇಶದಲ್ಲಿ ಕಾರ್ಮೆಲ್ ಗುರುಮಠವೊಂದರಲ್ಲಿ ಒಪ್ಪೊತ್ತಿನ ಊಟಕ್ಕೂ ಕಷ್ಟವೆನಿಸಿ, ಆರ್ಥಿಕ ಅಡಚನೆ, ಬಾಹ್ಯ ಒತ್ತಡಗಳು, ಕಾಡುವ ಅಸ್ವಸ್ಥತೆಯ ಕಾಲದಲ್ಲಿ ರಾಜರೊಬ್ಬರು ನೀಡಿದ ಬಾಲಯೇಸುವಿನ ಪ್ರತಿಮೆಯ ಪ್ರತಿಶ್ಟಾಪನೆ ಮಾಡಿ ಭಕ್ತಿ ಶೃಧ್ದೆಯಿಂದ ಬೇಡಿದಾಗ ಸಂಕಷ್ಟಗಳ ದಿನಗಳು ಮರೆಯಾಗಿ ಸಮೃದ್ಧಿ ನೆಲೆಗೊಳ್ಳಲು ಶುರುವಾಯಿತು. ಗುರುಮಠದ ಗುರುವರ್ಯರು ಈ ಭಕ್ತಿಯಾಚರಣೆ ವ್ಯಾಪಕವಾಗಿ ನಡೆಯಬೇಕೆಂದು ಆಶಿಸಿ, ಜನರಿಗೂ ಈ ಪ್ರತಿಮೆಯ ವಿಶೇಷತೆಯನ್ನು ತಿಳಿಯಪಡಿಸಿ, ಜನರೂ ಭಕ್ರಿಶೃದ್ಧೆಯಿಂದ ಬೇಡಿಕೊಂಡಾಗ ಅವರೂ ಇಂತಹ ಕೃಪಾಶೀರ್ವಾದಗಳನ್ನು ಪಡೆದುಕೊಂಡರು. ಅನಂತರದ ದಿನಗಳಲ್ಲಿ, ಯುದ್ಧಕಾಲದಲ್ಲಿ ಎಲ್ಲರೂ ಗುರುಮಠ ತೊರೆಯಬೇಕಾಗಿ ಬಂದಾಗ ಈ ಪ್ರತಿಮೆಯನ್ನು ಎಲ್ಲೋ ಒಂದು ಕಡೆ ಅಡಗಿಸಿಡಲಾಯಿತು. ಯುದ್ಧ ಮುಗಿದು ಮಠ ಮರುಸ್ಥಾಪನೆಗೊಂಡಾಗ ಸಂಕಷ್ಟಗಳ ಪುನರಾವರ್ತನೆಗೊಂಡಾಗ ಮತ್ತೊಮ್ಮೆ ಈ ಪ್ರತಿಮೆಯನ್ನು ನೆನೆದು, ಹುಡುಕಿ, ಮರುಪ್ರತಿಶ್ಟಾಪನೆ ಮಾಡಿದಾಕ್ಷಣ ಎಲ್ಲಾ ಸಮೃದ್ಧಿ ಹಿಂತಿರುಗಿದ್ದು ಬರೆದಿಡಲಾಗಿದೆ.

Photo : infantjesusmangalore.net

ಮಂಗಳೂರಿನಲ್ಲಿನ ಪವಾಡಸದೃಶ ಬಾಲಯೇಸು 

1945ರಲ್ಲಿ ಬೆಲ್ಜಿಯಮ್‍ನಿಂದ ಮಂಗಳೂರಿಗೆ ಬಂದ ಕಾರ್ಮೆಲ್ ಗುರುವರ್ಯರುಗಳು ಈ ಬೆಟ್ಟದ ಮೇಲೆ ಮನೆಮಾಡಿ, ಬಾಲಯೇಸುವಿನ ಭಕ್ತಿಯಾಚರಣೆಯನ್ನು ಆರಂಭಿಸಿದರು. ಇದು ಕಾಲಕ್ರಮೇಣ ಅನೇಕ ಭಕ್ತಾದಿಗಳನ್ನು ಸೆಳೆಯುವ ತಾಣವಾಗಿ ಮಾರ್ಪಾಡುಗೊಂಡಿದ್ದು, ಪ್ರಾರ್ಥನೆಯೇ ಇಲ್ಲಿಯ ಜೀವಾಳ. ಪ್ರಾರ್ಥನೆ, ಶೃಧ್ದೆ, ಭಕ್ತಿಗೆ ತಕ್ಕಂತೆ ವೈಯಕ್ತಿಕ ಜೀವನದಲ್ಲಿ ಭಕ್ತಾದಿಗಳು ರೋಗಗಳ ಉಪಶಮನವನ್ನು, ಕಷ್ಟನಿವಾರಣೆ, ಸಂತಾನಪ್ರಾಪ್ತಿ, ಕಾರ್ಯಸಿದ್ಧಿಯನ್ನು ಪಡೆದಿದ್ದಾರೆ. 9 ಗುರುವಾರಗಳ ವೃತವನ್ನು ಮುಗಿಸುವ ಮುಂಚೆಯೇ ಅನೇಕರಿಗೆ ಬೇಡಿದ ವರ ಸಿದ್ಧಿಸಿರುವುದು, ಭಕ್ತಾದಿಗಳ ಶೃಧ್ದೆಭಕ್ತಿಗೆ ಸಾಕ್ಷಿಯಾಗಿದೆ. ಭಕ್ತಾದಿಗಳ ದರ್ಶನಕ್ಕಾಗಿ ದೇವಾಲಯ ದಿನವಿಡೀ ತೆರೆದಿಡಲಾಗುತ್ತದೆ.

ಪುಣ್ಯಕ್ಷೇತ್ರದಲ್ಲಿನ ಜನಾನುರಾಗಿ ಕೆಲಸಗಳು

1996ರಲ್ಲಿ ನಿರ್ಮಿತಗೊಂಡ ವಿನೂತನ ಶೈಲಿಯಲ್ಲಿ ಕಟ್ಟಲಾದ ಈ ದೇವಾಲಯವು ಪ್ರೇಕ್ಶಣೀಯ ತಾಣವೂ ಹೌದು. ಈ ಕಾರ್ಮೆಲ್ ಗುಡ್ಡದ ಗುರುಮಠದ ಗುರುವರ್ಯರುಗಳು ಬಾಲಯೇಸುವಿನಲ್ಲಿ ಬರುವ ಭಕ್ತಾದಿಗಳಿಗೆ ಆತ್ಮಿಕ ಮಾರ್ಗದರ್ಶನವನ್ನು, ಬಲಿಪೂಜೆ-ಪ್ರವಚನಗಳನ್ನೂ ನೀಡಿ, ಭಕ್ತಾದಿಗಳ ವಿವಿಧ ಕೋರಿಕೆಗಳೆಗಾಗಿ ಪ್ರಾರ್ಥಿಸಿ ಆಶೀರ್ವದಿಸುತ್ತಾರೆ. ಪ್ರತಿ ಗುರುವಾರ 9 ಬಲಿಪೂಜೆಗಳು ಇಡೀ ದಿನ ಕೊಂಕಣಿ, ಇಂಗ್ಲೀಷ್, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ನೆರವೇರುತ್ತವೆ. ಮಾನಸಿಕವಾಗಿ ನೊಂದಿರುವವರಿಗೆ ಮನಶಾಸ್ತ್ರ ಬಲ್ಲ, ನುರಿತ ಗುರುವರ್ಯರುಗಳು ಕೌನ್ಸೆಲಿಂಗ್ ಮಾಡುತ್ತಾರೆ. ಅಮಲು ಸೇವನೆಯ ಚಟದಿಂದ ಮುಕ್ತಗೊಳ್ಳಲು ನಿರಂತರವಾಗಿ ಸಲಹೆ, ಮಾರ್ಗದರ್ಶನ, ಎಜೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಗುರುವಾರ ಉಚಿತ ವೈದ್ಯಕೀಯ ತಪಾಸಣೆ, ಬಡಬಗ್ಗರಿಗೆ ಅಗತ್ಯವಾಗಿ ಬೇಕಾದಾಗ ಆರ್ಥಿಕ ಸಹಾಯ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯಧನ ಹಾಗೂ ವಸ್ತುಗಳ ಪೂರೈಕೆ, ವೈದ್ಯಕೀಯ ಚಿಕಿತ್ಸೆಗೆ ಹಾಗೂ ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಆರ್ಥಿಕ ನೆರವು.. ಹೀಗೆ ಹತ್ತು ಹಲವು ಜನೋಪಯೋಗಿ ಕಾರ್ಯಗಳು ಪುಣ್ಯಕ್ಷೇತ್ರದ ಉದಾರ ಮನಸ್ಸಿನ ಭಕ್ತಾದಿಗಳ ಸಹಕಾರದಿಂದ ಹಾಗೂ ಕಾರ್ಮೆಲ್ ಗುರುವರ್ಯರ ಮುಂದಾಳುತ್ವದಲ್ಲಿ ನಡೆಯುತ್ತವೆ.

Article by Catholic Time Staff
Courtery : Infant Jesus Shrine, Mangalore

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.