Media Release
Mangaluru, Dec 22, 2023 : Under the joint auspices of Saint Mother Teresa Forum, Mother of God Church Mariagiri, CODP Institute Nantur, Jnanadeepa Mahila Mandali, Jyoti Stri Shakti Sangh, Deepa Friends Club, Shakti Friends Club, Padavu Friends Club, Vidya Devi Educational Charitable Trust, under the slogan 'Let Love Spread Everywhere', Souharda Christmas celebration was held successfully in Shaktinagar.
ಶಕ್ತಿನಗರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ
ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮದರ್ ಆಫ್ ಗಾಡ್ ಚರ್ಚ್ ಮರಿಯಗಿರಿ, ಸಿಓಡಿಪಿ ಸಂಸ್ಥೆ ನಂತೂರು ,ಜ್ಣಾನದೀಪ ಮಹಿಳಾ ಮಂಡಳಿ, ಜ್ಯೋತಿ ಸ್ತ್ರಿ ಶಕ್ತಿ ಸಂಘ, ದೀಪಾ ಫ್ರೆಂಡ್ಸ್ ಕ್ಲಬ್, ಶಕ್ತಿ ಫ್ರೆಂಡ್ಸ್ ಕ್ಲಬ್, ಪದವು ಫ್ರೆಂಡ್ಸ್ ಕ್ಲಬ್, ವಿದ್ಯಾದೀವಿಗೆ ಏಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಶಕ್ತಿನಗರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಮದರ್ ಆಫ್ ಗಾಡ್ ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಜೆರಾಲ್ಡ್ ಡಿಸೋಜರವರು ಮಾತನಾಡುತ್ತಾ, "ಇಡೀ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರಿ ಶಾಂತಿದೂತರಾಗಿ ಮೆರೆದ ಯೇಸುಕ್ರಿಸ್ತರ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ.ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದ ಈ ಕಾಲದಲ್ಲಿ ಮಾನವೀಯ ಮೌಲ್ಯಗಳು ಉತ್ತುಂಗಕ್ಕೇರಬೇಕಾದರೆ ಎಲ್ಲಾ ಧರ್ಮಗಳ ಹಬ್ಬಗಳನ್ನು ಸರ್ವ ಧರ್ಮದ ಜನತೆ ಒಂದಾಗಿ ಆಚರಿಸಿದರೆ ಮಾತ್ರ ಸಾಧ್ಯ" ಎಂದು ಅಭಿಪ್ರಾಯಪಟ್ಟರು.
ಹಿರಿಯ ಚಿಂತಕರೂ, ನಿವ್ರತ್ತ ಪ್ರಾಂಶುಪಾಲರಾದ ಡಾ.ವಸಂತ ಕುಮಾರ್ ರವರು ಮಾತನಾಡುತ್ತಾ, "ದ್ವೇಷ ತುಂಬಿದ ನಾಡಿನಲ್ಲಿ ಪ್ರೀತಿ ಹಂಚುವ ಕಾರ್ಯ ಭರದಿಂದ ಸಾಗಬೇಕಾಗಿದೆ. ಪ್ರತಿಯೊಬ್ಬರ ಬದುಕು ಹಸನಾಗಬೇಕಾದರೆ ಪ್ರೀತಿ ಶಾಂತಿ ನೆಲೆಗೊಂಡರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಹ್ರದಯ ಹ್ರದಯಗಳನ್ನು ಬೆಸೆಯುವಲ್ಲಿ ನಾಂದಿ ಹಾಡಲಿ" ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಮಾತನಾಡಿ, "ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಸಮಾಜ ಘಾತುಕ ಶಕ್ತಿಗಳ ವಿರುದ್ದ ಮನಸು ಮನಸುಗಳ ಮಧ್ಯೆ ಸೇತುವೆ ನಿರ್ಮಾಣ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಂದು ಧರ್ಮದ ಹಬ್ಬಗಳು ಆಯಾಯ ಧರ್ಮದ ಜನತೆಗೆ ಸೀಮಿತವಾಗದೆ ಸರ್ವ ಧರ್ಮದ ಜನತೆ ಒಗ್ಗೂಡಿ ಆಚರಿಸಿದಾಗ ಮಾತ್ರವೇ ಭವ್ಯ ಭಾರತದ ಪರಂಪರೆ ನೆಲೆಗೊಳ್ಳಲು ಸಾಧ್ಯ" ಎಂದು ಹೇಳಿದರು.
ಸಿಓಡಿಪಿ ಸಂಸ್ಥೆಯ ಧರ್ಮಗುರುಗಳಾದ ಫಾ.ವಿನ್ಸೆಂಟ್ ಡಿಸೋಜ, ಸ್ಥಳೀಯ ಕಾರ್ಪೊರೇಟರ್ ಗಳಾದ ಕಿಶೋರ್ ಕೊಟ್ಟಾರಿ, ವನಿತಾ ಪ್ರಸಾದ್ ರವರು ಶುಭಕೋರಿ ಮಾತನಾಡಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಫಾ.ಸುದೀಪ್ ಪೌಲ್, ಫಾ.ಅನಿಲ್ ಐವನ್ ಫೆರ್ನಾಂಡೀಸ್, ಪ್ರಕಾಶ್ ಗಟ್ಟಿ,ದೇವಾನಂದ, ಮೇರಿ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಧೀರ್ಘ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದಿರುವ ಪುಷ್ಪಾ ಬಿ ಶೆಟ್ಟಿ ಹಾಗೂ ನಾಲ್ಯಪದವು ಶಾಲೆಯ ಉನ್ನತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿರುವ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ದ್ರಾಕ್ಷಾಯಿಣಿ ವೀರೇಶ್ ಯವರನ್ನು ಸನ್ಮಾನಿಸಲಾಯಿತು.
ಯುವ ವಕೀಲರಾದ ಮನೋಜ್ ವಾಮಂಜೂರುರವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ರೊನಾಲ್ಡ್ ಟೋನಿ ಪಿಂಟೋರವರು ಸ್ವಾಗತಿಸಿದರೆ, ಕೊನೆಯಲ್ಲಿ ಅಂಗನವಾಡಿ ಶಿಕ್ಷಕಿಯಾದ ಪುಷ್ಪಾ ಶೆಟ್ಟಿಯವರು ವಂದಿಸಿದರು.