Media Release

Mangaluru, June 25, 2024 : Regarding to the rampant illegal sand mining in Pavoor Uliya island, leaders from the Catholic Sabha Mangalore Pradesh, Mother Teresa Vichara Vedike and District Joint Forum of Like-minded Organizations submitted a memorandum to deputy commissioner Mullai Muhilan MP, IAS, on Monday, June 24.


ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಯಲು ಹಾಗೂ ದ್ವೀಪವಾಸಿಗಳ ಬದುಕಿನ ರಕ್ಷಣೆಗೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಭೇಟಿ

ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಬೇಕು ಹಾಗೂ ಅಲ್ಲಿನ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಹಾಗೂ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಆಶ್ರಯದಲ್ಲಿ 2024 ಜೂನ್ 24 ರಂದು ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು._

ಉಳ್ಳಾಲ ತಾಲೂಕು, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ಉಳಿಯ ದ್ವೀಪ(ಕುದ್ರು) ದಲ್ಲಿ ಯಾವುದೇ ತರಹದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಇಡೀ ಉಳಿಯ ದ್ವೀಪ ಕೊಚ್ಚಿಹೋಗುವ ಭೀತಿಗೆ ಗುರಿಯಾಗಿದೆ. ಸುಮಾರು 55 ಕುಟುಂಬಗಳು ಹಲವು ತಲೆಮಾರುಗಳಿಂದ ವಾಸ ಇರುವ, ಕಾಂಡ್ಲಾ ಜಾತಿಯ ಸಸ್ಯವರ್ಗಗಳಿರುವ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ವಾಗಿರುವ ಉಳಿಯ ದ್ಚೀಪವನ್ನು ರಕ್ಷಿಸಲು ತಕ್ಷಣದಿಂದಲೇ ಅಕ್ರಮ ಮರಳುಗಾರಿಕೆಗೆ ಪೂರ್ಣ ರೀತಿಯ ಕಡಿವಾಣ ಹಾಕಬೇಕು, ಈ ವರೆಗೆ ನಿಯಮಗಳನ್ನು ಪೂರ್ತಿ ಉಲ್ಲಂಘಿಸಿ ಅರ್ಧ ದ್ವೀಪವನ್ನೇ ಕಬಳಿಸಿರುವ ಅಕ್ರಮ ಮರಳುಗಾರಿಕೆಯ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಲು ತನಿಖೆಗೆ ಆದೇಶಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ದ್ವೀಪದಲ್ಲಿ ಸರ್ವೇ ನಡೆಸಿ "ಉಳಿಯ ದ್ವೀಪ (ಕುದ್ರು) ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಸಿಆರ್ ಜೆಡ್ - 1 ರಲ್ಲಿದೆ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2011 ರಂತೆ ಇಲ್ಲಿ ಮರಳುಗಾರಿಕೆಗೆ ಅವಕಾಶ ಇರುವುದಿಲ್ಲ" ಎಂದು ಅಭಿಪ್ರಾಯ ಪಟ್ಟಿರುತ್ತದೆ. ಆದರೂ ಕಳೆದ ಎರಡು ದಶಕಗಳಿಂದ ಉಳಿಯ ಕುದ್ರುವಿನಲ್ಲಿ ಪೊಲೀಸ್ ಹಾಗೂ ವಿವಿಧ ಇಲಾಖೆಗಳು, ರಾಜಕೀಯ ಹಿತಾಸಕ್ತಿಗಳ ಬೆಂಬಲದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಮರಳು ದಂಧೆ ನಡೆಸುತ್ತಾ ಬಂದಿರುತ್ತಾರೆ. 2014 ರಲ್ಲಿ ಆಗಿನ ದ.ಕ. ಜಿಲ್ಲಾಧಿಕಾರಿ A B ಇಬ್ರಾಹಿಂ ರವರು ಅಕ್ರಮ ಮರಳುಗಾರಿಕೆ ಕುರಿತಾದ ಸತತ ದೂರಿನ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಆಗಿರುವ ಅನಾಹುತಗಳನ್ನು ಕಂಡು ದ್ವೀಪದ ಸುತ್ತಲ ಒಂದು ಕೀ ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆ ನಿಷೇಧಿಸಿ 28.11.2014 ರಂದು ಆದೇಶ ಹೊರಡಿಸಿರುತ್ತಾರೆ.

ಆ ತರುವಾಯ ಒಂದಿಷ್ಟು ಕಾಲ ಸ್ಥಗಿತಗೊಂಡಿದ್ದ ಮರಳುಗಾರಿಕೆ ದಂಧೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಆರಂಭಗೊಂಡಿದೆ. ಈಗಿನ ಒಂದೆರಡು ವರ್ಷಗಳಲ್ಲಿ ಉಳಿಯ ಕುದ್ರುವಿನ ಸುತ್ತಲೂ ದಿಬ್ಬದಂತಿದ್ದು ದ್ವೀಪದ ರಕ್ಷಾ ಕವಚದಂತಿರುವ ದಿಬ್ಬದಂತಹ ಭಾಗದಲ್ಲಿರುವ ಕಾಂಡ್ಲಾ ಜಾತಿಯ ಸಸ್ಯಗಳನ್ನು ಕಿತ್ತು ಹಾಕಿ ಅಲ್ಲಿಂದ ಹಾರೆ, ಪಿಕಾಸಿಗಳ ಮೂಲಕ ನೇರವಾಗಿ ಮರಳನ್ನು ದಂಧೆಕೋರರು ಕಬಳಿಸುತ್ತಿದ್ದಾರೆ. ಈ ದಂಧೆಗೆ ಸ್ಥಳೀಯ ಪೊಲೀಸ್ ಠಾಣೆಯ ಶ್ರೀ ರಕ್ಷೆಯೂ ಇರುತ್ತದೆ. ದೂರು ನೀಡಿದಲ್ಲಿ ದೂರು ನೀಡಿದವರ ಪೂರ್ತಿ ವಿವರಗಳನ್ನು ಪೊಲೀಸರೇ ದಂಧೆಕೋರರಿಗೆ ತಲುಪಿಸುತ್ತಾರೆ.ಈ ರೀತಿಯ ಮರಳುಗಾರಿಕೆಯಿಂದ ಈಗಾಗಲೆ ಕುದ್ರುವಿನ ಭೂಪ್ರದೇಶ ಅರ್ಧಕ್ಕಿಳಿದಿದೆ. ನದಿಯ ಪಾತ್ರ ಅಗಲ, ಆಳಗೊಂಡಿದ್ದು ನದಿ ನೀರು ಒಳಭಾಗಕ್ಕೆ ಹರಿಯುತ್ತಿದೆ. ರಭಸದ ನೆರೆ ನೀರಿನ ಸಂದರ್ಭ ಉಳಿದ ಭಾಗಗಳು ಸವೆಯುವ ಸಾಧ್ಯತೆಗಳಿವೆ. ಹೀಗೆಯೆ ಮುಂದುವರಿದಲ್ಲಿ ಇಡೀ ಉಳಿಯ ದ್ವೀಪ ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗುವ ಭೀತಿ ಎದುರಾಗಿದೆ ಎಂದು ಉಭಯ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಕೆಥೊಲಿಕ್ ಸಭಾದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ವಿವಿಧ ಸಂಘಟನೆಗಳ ಮುಖಂಡರಾದ ಮಂಜುಳಾ ನಾಯಕ್, ಬಿ.ಶೇಖರ್,ಸುನಿಲ್ ಕುಮಾರ್ ಬಜಾಲ್,ಸಂತೋಷ್ ಬಜಾಲ್, ಸ್ಟಾನಿ ಲೋಬೋ,ಆಲ್ವಿನ್ ಮೊಂತೆರೋ,ಜೋನ್ ಡಿಸೋಜ,ಸ್ಟಾನ್ಲಿ ಡಿಕುನ್ನಾ ಹಾಗೂ ಸ್ಥಳೀಯರಾದ ಗಿಲ್ಬರ್ಟ್ ಡಿಸೋಜ, ಲವೀನಾ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.