Photo by Alberto Casetta on Unsplash
ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮಹತ್ವದ್ದು. ತಂದೆ ತಾಯಿ ಮಕ್ಕಳ ಮೊದಲ ಗುರುಗಳು, ಶೇಕಡ 90ರಷ್ಟು ಮೌಲ್ಯಗಳನ್ನು ಮಕ್ಕಳು ಮನೆಯಲ್ಲಿ ಕಲಿಯುತ್ತಾರೆ. ಈ ವಿಷಯದ ಬಗ್ಗೆ ಮಾತನಾಡುವಾಗ ನನಗೆ ನಿಜ ಜೀವನದಲ್ಲಿ ನಡೆದ ಎರಡು ಘಟನೆಗಳು ನೆನಪು ಬರುತ್ತವೆ. ತಂದೆ ತಾಯಿ ಮಕ್ಕಳ ಓದಿಗಾಗಿ ಕಷ್ಟಪಟ್ಟು ದುಡಿದು ಶಾಲೆಯ ಶುಲ್ಕವನ್ನು ಕಟ್ಟಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾರೆ. ಆದರೆ ಮಕ್ಕಳು ತಂದೆ ತಾಯಿಯ ಶ್ರಮಕ್ಕೆ ಬೆಲೆ ಕೊಡದೆ, ತಮ್ಮನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳದೆ, ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಈಗಿನ ಕಾಲದಲ್ಲಿ ಬೇರೆ ಬೇರೆ ಕೆಟ್ಟ ಚಟಗಳು ಇವೆ, ನಾವು ಕೆಟ್ಟ ಚಟಗಳು ಎಂದ ಕ್ಷಣ ನಮಗೆ ನೆನಪಿಗೆ ಬರುವುದು ಡ್ರಗ್ಸ್ ಇತ್ಯಾದಿ. ಆದರೆ ಸ್ನೇಹಿತರು ಎಂದರೆ! ಎಲ್ಲರೂ ಒಳ್ಳೆಯ ಸ್ನೇಹಿತರು, ಅದರಲ್ಲಿ ಒಳ್ಳೆಯವರು, ಕೆಟ್ಟವರು ಎಂದಿಲ್ಲ, ಆದರೆ ಅವರ ಸಹವಾಸ ಮಾಡಿದರೆ ತನ್ನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಒಂದು ಗಾದೆ ಇದೆ, ಸಜ್ಜನರ ಸಂಘ ಹೆಜ್ಜೇನು ಸವಿದಂತೆ. ಕೆಟ್ಟವರ ಸಹವಾಸ ತನ್ನ ಮೇಲೆ ತಾನೆ ಚಪ್ಪಡಿ ಕಲ್ಲು ಹಾಕಿದಂತೆ, ಈ ಗಾದೆಯಂತೆ ಒಂದು ಘಟನೆ ನಡೆಯುತ್ತದೆ.
ನಾನು ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾಗ ಬಿಬಿಎ ದ್ವಿತೀಯ ವರ್ಷದ ಒಬ್ಬ ವಿದ್ಯಾರ್ಥಿಯ ಮರಣದ ಸುದ್ದಿ ನಮಗೆ ತಿಳಿಯಿತು. ನಮ್ಮ ತರಗತಿ ಉಪನ್ಯಾಸಕರು ನಮಗೆ ಇಡೀ ಘಟನೆಯನ್ನು ವಿವರಿಸಿದರು. ಆ ಹುಡುಗ ತನ್ನ ಸ್ನೇಹಿತರೊಂದಿಗೆ ರೆಸಾರ್ಟ್ ಗೆ ತೆರಳಿದ್ದನು. ಅಲ್ಲಿ ಈಜುಕೊಳದಲ್ಲಿಈಜಲು ಎಲ್ಲರೂ ಹೇಳಿದರು. ಆದರೆ ಆ ಹುಡುಗ ಇಳಿಯಲಿಲ್ಲ. ಕುಡಿದ ಮತ್ತಿನಲ್ಲಿದ್ದ ಅವನ ಸ್ನೇಹಿತರು ಅವನಿಗೆ ಬಲತ್ಕಾರದಿಂದ ಕುಡಿಸಿ ಅವನನ್ನು ಈಜುಕೊಳಕ್ಕೆ ತಳ್ಳಿದರು. ಇದೇ ಮೊದಲು ಬಾರಿ ಕುಡಿದ ಹುಡುಗನಿಗೆ ತನ್ನ ಮೇಲೆ ನಿಯಂತ್ರಣವಿರಲಿಲ್ಲ. ಆ ಕುಡಿದ ಮತ್ತಿನಲ್ಲಿ ನೀರಿನಲ್ಲಿ ಮುಳುಗಿದ. ಆದರೆ, ಅವನ ಸ್ನೇಹಿತರು ಅದಕ್ಕೆ ಕಿವಿಯಾಡಿಸಲಿಲ್ಲ. ಸ್ವಲ್ಪ ಸಮಯದ ನಂತರ ಅವನನ್ನು ಎಷ್ಟು ಕರೆದರೂ ಅವನು ನೀರಿನಿಂದ ಮೇಲೆ ಬರಲಿಲ್ಲ. ಕೊನೆಗೆ ನೋಡಿದಾಗ ದೊಡ್ಡ ದುರಂತ ಕಾದಿತ್ತು, ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಹುಡುಗನ ತಂದೆ ತಾಯಿಯ ಆಕ್ರಂದನ ಕಣ್ಣಿಂದ ನೋಡಲಾಗುತ್ತಿರಲಿಲ್ಲ. ಚಿಕ್ಕಮಗಳೂರಿನಿಂದ ತನ್ನ ಮಗನ ಸಾವಿನ ಸುದ್ದಿ ಕೇಳಿ ಓಡಿ ಬಂದ ತಂದೆ ತಾಯಿ ಕಣ್ಣೀರು ಸುರಿಸಿದರು, ಬೊಬ್ಬೆ ಇಟ್ಟರು. ಕಾಫಿ ತೋಟದಲ್ಲಿ ಕಷ್ಟಪಟ್ಟು ದುಡಿದು ಮಗನನ್ನು ಒಳ್ಳೆಯ ಕಾಲೇಜಿನಲ್ಲಿ ಓದಿಸಿದ ತಂದೆ ತಾಯಿಗೆ ಸಿಗುವ ಪ್ರತಿಫಲ ಏನು? ಈ ಘಟನೆ ಕೇಳಿ ನಮ್ಮ ಕಣ್ಣಿನಲ್ಲಿ ನೀರು ತುಂಬಿ ಬಂತು.
ಇನ್ನೊಂದು ಘಟನೆ ತಂದೆ ತಾಯಿಯ ಮಗುವಿನ ಮೇಲಿನ ವಿಪರೀತ ವ್ಯಾಮೋಹ ಬಗ್ಗೆ, ದಾರಿಯಲ್ಲಿ ಹೋಗುವಾಗ ರಿಕ್ಷಾದವರು ಒಬ್ಬರು ಹೇಳಿದ ಘಟನೆ. ಅವರು ಮಕ್ಕಳನ್ನು ಶಾಲೆಗೆ ಕರೆತರುವ ಮತ್ತು ಅವರನ್ನು ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಾರೆ. ಒಂದು ದಿನ ಒಂದು ಮಗು ಹೈವೇಯಲ್ಲಿ ಹೋಗುತ್ತಿರುವಾಗ ರಿಕ್ಷಾದಿಂದ ತಲೆ ಹೊರಗೆ ಹಾಕಿದಾಗ ಅವರು ಬೈದರು. ಅದರ ಮಾರನೇ ದಿನ ಆ ಮಗುವಿನ ಹೆತ್ತವರು ಬಂದು ಅವರನ್ನು ಅವ್ಯಾಚಾ ಪದಗಳಿಂದ ಬೈದು ಅವಮಾನಿಸಿದರು, ಹೊಡೆಯಲು ಬಂದರು. ನೀನು ಬೈದ ಕಾರಣ ನನ್ನ ಮಗನಿದ್ದೆ ಮಾಡಿಲ್ಲ, ನಿನ್ನೆ ಊಟ ಮಾಡಿಲ್ಲ. ಆದರೆ ಆ ಹೆತ್ತವರು ರಿಕ್ಷಾ ಡ್ರೈವರ್ ಯಾಕೆ ಬೈದರು? ಎಂದು ಒಂದು ಸಲ ಕೂಡ ಕೇಳಲಿಲ್ಲ.
ಎರಡು ಘಟನೆಗಳನ್ನು ಗಮನಿಸಿದಾಗ ಮೊದಲನೇ ಘಟನೆಯಲ್ಲಿ ತಂದೆ ತಾಯಿ ಸರಿ ಇದ್ದರು, ಮಕ್ಕಳು ಕೆಟ್ಟಚಟಗಳಿಂದ ಅಥವಾ ಕೆಟ್ಟ ಸಹವಾಸದಿಂದ ಹಾಳಾಗುತ್ತಾರೆ. ಎರಡನೇ ಘಟನೆಯಲ್ಲಿ ತಂದೆ ತಾಯಿ ಮಕ್ಕಳನ್ನು ಮುದ್ದು ಮಾಡಿ ಹಾಳು ಮಾಡಿದರು. ಮಕ್ಕಳ ಪರವಹಿಸಿ ಮಾತನಾಡುವುದು, ನಿಜ ಘಟನೆಯನ್ನು ಅರಿಯದೆ ಮಕ್ಕಳ ಮಾತನ್ನೇ ಕೇಳಿ ತೀರ್ಮಾನಕ್ಕೆ ಬರುವುದು, ಇದಕೆಲ್ಲ ಕಾರಣ ಮಕ್ಕಳ ಮೇಲಿನ ವಿಪರೀತ ವ್ಯಾಮೋಹ. ಇತ್ತೀಚಿನ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಅರಿಯದೆ ಬೇರೆಯವರ ತರ ನೀನು ಹಾಗೆ ಆಗಬೇಕು ಎಂದು ಬಲತ್ಕಾರ ಮಾಡುತ್ತಾರೆ ಹಾಗೂ ಬೇರೆಯವರ ಜೊತೆ ತುಲನೆ ಮಾಡುತ್ತಾರೆ. ತಮ್ಮ ಮಕ್ಕಳ ಸಾಮರ್ಥ್ಯವನ್ನು ಅರಿತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡಬೇಕು. ತಂದೆ ತಾಯಿ ತಮ್ಮ ಕಷ್ಟಗಳನ್ನು ಮಕ್ಕಳಲ್ಲಿ ಹಂಚಿಕೊಳ್ಳಬೇಕು. ತಮಗೆ ಬಂದ ಕಷ್ಟ ಮಕ್ಕಳಿಗೆ ಬಾರದೇ ಇರಲಿ ಎಂದು ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಸಾಕಿದರೆ ಮಗುವಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.
ಬಿತ್ತಿದಂತೆ ಬೆಳೆ ಎಂಬಂತೆ ಮಕ್ಕಳ ಅಭಿರುಚಿ ತಿಳಿದುಕೊಂಡು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಹಿರಿಯರು ಶ್ರಮಿಸಿದರೆ ಖಂಡಿತವಾಗಿಯೂ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸಲು ಸಾಧ್ಯವಿದೆ.
Article written by :
Royston Lasrado
St. Aloysius Institute of Education, Mangaluru